
ಎತ್ತಿನಹೊಳೆ: ಗೋಸುಂಬೆ ರಾಜಕಾರಣಿಗಳ ನಿಜಬಣ್ಣ ಬಯಲು!
- ಅಂದು ಎತ್ತಿನಹೊಳೆ ವಿರುದ್ಧ ಕೆಂಡದಂಥ ಭಾಷಣ, ಯಾತ್ರೆ
- ಇಂದು ಬಾಯಿಗೆ ಬೀಗ ಹಾಕಿ ಕೂತವರು, ಯಾರಿವರು?
ಕುಡ್ಲ ಪಾಲಿಟಿಕ್ಸ್: ಬಯಲುಸೀಮೆಯ 7 ರಾಜ್ಯಗಳಿಗೆ ನೀರುಣಿಸುವ ಎತ್ತಿನಹೊಳೆ ಯೋಜನೆಯ ಮೊದಲ ಹಂತದ ಕಾಮಗಾರಿಗೆ ರಾಜ್ಯ ಸರ್ಕಾರ ಚಾಲನೆ ನೀಡಿ ನಾಲ್ಕು ವಾರಗಳು ಸಂದಿವೆ. ದಶಕದ ಹಿಂದೆ, ಈ ಯೋಜನೆಯಿಂದ ಕರಾವಳಿಗೆ ಭಾರೀ ದೊಡ್ಡ ಕಂಟಕ ಇದೆ ಎನ್ನುತ್ತಾ ಬೀದಿ ಬೀದಿಯಲ್ಲಿ ಡಂಗುರ ಸಾರುತ್ತಿದ್ದ ರಾಜಕಾರಣಿಗಳಲ್ಲಿ ಒಬ್ಬನೇ ಒಬ್ಬ ಈಗ ಈ ಬಗ್ಗೆ ಮಾತೇ ಆಡ್ತಿಲ್ಲ!
ಹತ್ತೇ ವರ್ಷಗಳ ಹಿಂದೆ ಎತ್ತಿನಹೊಳೆ ಜಾರಿ ಮಾಡಲು ಬಿಡಲ್ಲ ಎಂದು ಬೆಂಕಿಯಂಥ ಭಾಷಣ ಬಿಗಿದವರು ಇಂದು ಯೋಜನೆ ಉದ್ಘಾಟನೆಯಾದಾಗ ಬಾಯಿಗೆ ಪ್ಲಾಸ್ಟರ್ ಹಚ್ಚಿ ಕೂತಿದ್ದಾರೆ. ಜನರ ಪಾಲಿಗೆ ಹಾಗೂ ತುಳುನಾಡಿನ ನೆಲ- ಜಲಕ್ಕೆ ಮಾರಣಾಂತಿಕವಾದ ಯೋಜನೆ ಬಗ್ಗೆ ಸೊಲ್ಲೆತ್ತದವರಿಗೆ ಜನ ಪಾಠ ಕಲಿಸುವ ದಿನ ಬಂದಿದೆ.
2013ರ ಆಸುಪಾಸಿನಲ್ಲಿ ನೇತ್ರಾವತಿ ನದಿ ತಿರುವು ಯೋಜನೆ ಎನ್ನುವ ಹೆಸರಿನಲ್ಲಿ ಈ ಯೋಜನೆ ಪ್ರಚಲಿತಕ್ಕೆ ಬಂದಿತ್ತು. ಆಗ ಕರಾವಳಿಯಲ್ಲಿ ಕೋಲಾಹಲವೆದ್ದಿತ್ತು. ಪರಿಸರ ಹೋರಾಟಗಾರರು, ಪರಿಸರ ತಜ್ಞರು, ನಿಜವಾದ ಜನಪರ ಕಾಳಜಿಯುಳ್ಳ ಅನೇಕರು ಯೋಜನೆಯನ್ನು ತೀವ್ರವಾಗಿ ವಿರೋಧಿಸಿದ್ದರು. ಆಗಿನ ಸರ್ಕಾರ ಜನರ ಕಣ್ಣಿಗೆ ಮಣ್ಣೆರಚಲು ಯೋಜನೆಯ ಹೆಸರನ್ನು ಮಾತ್ರ ಬದಲಿಸಿ ಎತ್ತಿನಹೊಳೆ ಅಂತ ಮಾಡಿತು. ಆದರೂ ಜನರ ವಿರೋಧ ಕಡಿಮೆ ಆಗಿರಲಿಲ್ಲ. ಆಗ ಎಂಟ್ರಿ ಕೊಟ್ಟದ್ದೇ ಈ ನಾಲಾಯಕ್ ರಾಜಕಾರಣಿಗಳು!
ಛಿ ಕಳ್ಳ!:
ಈಗಿನಂತೆ ಆಗಲೂ ಜನರು ಗೋಸುಂಬೆ ರಾಜಕಾರಣಿಗಳನ್ನು ನಂಬಿದರು. ಅವರು ಯಾತ್ರೆ, ಪಾದಯಾತ್ರೆ ಮಾಡೋದೇನು, ಕೆಂಡದಂಥ ಭಾಷಣಗಳೇನು. ಅಬ್ಬಬ್ಬಾ! ಈಗ ಈ ರಾಜಕಾರಣಿಗಳ ಬಾಯಲ್ಲಿನ ಕೆಂಡದ ಬೆಂಕಿಯೆ ಆರಿಹೋಗಿದೆ!
ಕುಡ್ಲದಲ್ಲಿ ನಾಯಿ ಬೇಲಿ ಹಾರಿದರೂ ರಾದ್ಧಾಂತ ಮಾಡುವ ಈ ರಾಜಕಾರಣಿಗಳು ಎತ್ತಿನಹೊಳೆ ಎಂದಾಗ ಮಾತ್ರ ಮೌನ ಆಗೋದು ಯಾಕೆ?
ಯಾಕೆ ಎಂದರೆ ಎತ್ತಿನಹೊಳೆಯಲ್ಲಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಎನ್ನುವ ಮೂವರೂ ಕಳ್ಳರಿದ್ದಾರೆ ಎಂದು ಜನ ಆಡಿಕೊಳ್ತಿದಾರೆ. ಈ "ಕಲಿಯುಗದ ಕಳ್ಳ"ರಿಂದಲೇ ಕುಡ್ಲದ ಜನ ಒಂದಲ್ಲ ಒಂದು ದಿನ ತೊಂದರೆಗೆ ಒಳಗಾಗಲಿದ್ದಾರೆ ಎನ್ನುವುದಂತೂ ಸತ್ಯ.
ಮಾಡಿದ್ದು ಯಾರು, ಆಟ ಆಡಿದ್ಯಾರು?:
ಡಿವಿ ಸದಾನಂದ ಗೌಡ ರಾಜ್ಯದ ಸಿಎಂ ಆಗಿದ್ದಾಗ ಎತ್ತಿನಹೊಳೆ ಯೋಜನೆಗೆ 8,323 ಕೋಟಿ ರು. ನಿಗದಿಪಡಿಸಿ ಆಡಳಿತಾತ್ಮಕ ಅನುಮೋದನೆ ನೀಡಿದ್ದರು. 2014ರಲ್ಲಿ ಸಿದ್ದರಾಮಯ್ಯ ಸಿಎಂ ಆದರು. ಆಗ 12,912 ಕೋಟಿ ರು. ಪರಿಷ್ಕೃತ ಯೋಜನೆಗೆ ಮಂಜೂರಾತಿ ನೀಡಿ ಅದೇ ವರ್ಷ ಚಿಕ್ಕಬಳ್ಳಾಪುರದಲ್ಲಿ ಶಂಕುಸ್ಥಾಪನೆ ನೆರವೇರಿಸಿದ್ದರು. ಶಂಕುಸ್ಥಾಪನೆ ಬಳಿಕ ದ.ಕ.ದಲ್ಲಿ ಹೋರಾಟವೇ ಹೋರಾಟ. ಯೋಜನೆ ಮಾಡಲು ಬಿಡಲ್ಲ ಎಂದು ತಾವೇ ಬೇಲಿ ಎಂಬಂತೆ ನಟಿಸಿದರು. ಸಂಸದರಾಗಿದ್ದ ನಳಿನ್ ಕುಮಾರ್ ಕಟೀಲು ರಥಯಾತ್ರೆ ಮಾಡಿಸಿಯೂ ಆಯ್ತು. ಈಗ ಇರೋ ಶಾಸಕರಲ್ಲಿ ಹೆಚ್ಚಿನವರದ್ದು ಆಗ ಭಯಂಕರ ಹೋರಾಟ! ಆಗಿನ್ನೂ ಶಾಸಕರೇ ಆಗಿರದ ಇವರು ನಂತರದ ದಿನಗಳಲ್ಲಿ ಶಾಸಕರಾಗಲು ಈ ಹೋರಾಟದ ಪಾಲೂ ಇದೆ. ಶಾಸಕರಾದ ಬಳಿಕ ಈ ನೆಲದ ಗಂಭೀರ ಸಮಸ್ಯೆ ಬಗ್ಗೆ ಅವರ ಬಾಯಿ ತೆರೆಯುವುದೇ ಇಲ್ಲ!
ಕಮಿಷನ್ ಪಾಲು?:
ಅಲ್ಲ ಸ್ವಾಮಿ, ಎತ್ತಿನಹೊಳೆ ಯೋಜನೆ ಉದ್ಘಾಟನೆ ಮಾಡಿದ್ದು ಕಾಂಗ್ರೆಸ್ ಸರ್ಕಾರ. ಹಾಗಾಗಿ ಕಾಂಗ್ರೆಸಿಗರು ಈ ಬಗ್ಗೆ ಮಾತಾಡಲ್ಲ. ಆದರೆ ಬಿಜೆಪಿಯವರಿಗೆ ವಿರೋಧದ ನಾಲ್ಕು ಮಾತನ್ನಾದರೂ ಆಡಬಹುದಲ್ವೆ? ಕಾಂಗ್ರೆಸ್‌ನ ಪ್ರತಿಯೊಂದನ್ನೂ ಇವರು ಬೀದಿ ರಂಪ ಮಾಡ್ತಾರೆ. ಎತ್ತಿನಹೊಳೆ ಬಗ್ಗೆ ಮಾತ್ರ ಇವರ ನಾಲಗೆ ಹೊರಳೋದೆ ಇಲ್ಲ ಯಾಕೆ? ಇವರಿಗೆ ಯೋಜನೆಯ ಕಮಿಷನ್‌ನಲ್ಲಿ ಪಾಲು ಇರಲೂಬಹುದು. ಹೊರಗೆ ಮಾತ್ರ ಬಿಜೆಪಿ- ಕಾಂಗ್ರೆಸ್ ಎನ್ನುವ ಕಿತ್ತಾಟ. ಒಳಗೆ ಎಲ್ಲರೂ ಒಂದೇ- ಪರಸ್ಪರ ನೆಂಟರಂತೆ ಎನ್ನುತ್ತಾರೆ ಆಗಿನ ಹೋರಾಟಗಾರರಲ್ಲಿ ಒಬ್ಬರು.
ಕೇವಲ 8,323 ಕೋಟಿ ರು. ಅಂದಾಜು ವೆಚ್ಚದ ಮೂಲಕ ಎತ್ತಿನಹೊಳೆ ಯೋಜನೆ ಆರಂಭವಾಗಿತ್ತು. ಈಗ ಅದರ ವೆಚ್ಚ ಬರೋಬ್ಬರಿ 23 ಸಾವಿರ ಕೋಟಿ ರುಪಾಯಿಗೆ ಏರಿದೆ. ಇನ್ನು ಕೆಲವು ವರ್ಷಗಳಲ್ಲಿ 50 ಸಾವಿರ ಕೋಟಿಗೆ ಏರುವುದರಲ್ಲಿ ಸಂಶಯವೆ ಇಲ್ಲ. ಯಾವ ಸರ್ಕಾರ ಬಂದರೂ ಭರಪೂರ ಹಣ ಉದುರಿಸೋ ಮರವೇ ಈ ಎತ್ತಿನಹೊಳೆ!