ಕುಡ್ಲದ ಪಿಲಿ ಕುಣಿತ ಅಬ್ಬರ!
ಕುಡ್ಲದ ಪಿಲಿ ಕುಣಿತ ಅಬ್ಬರ!
- ಪಿಲಿನಲಿಕೆ ಪ್ರತಿಷ್ಠಾನದ 9ನೇ ವರ್ಷದ ಹುಲಿಕುಣಿತ ಸ್ಪರ್ಧೆ
- ಸಡಗರದಿಂದ ನಡೆದ ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನದ ಪಿಲಿ ಪರ್ಬ
ಕುಡ್ಲದ ನವರಾತ್ರಿ ಸಡಗರದಲ್ಲಿ ಹುಲಿ ಕುಣಿತ ನೋಡುವುದೇ ಒಂದು ಖುಷಿ. ಅದರಲ್ಲೂ ಹುಲಿ ಕುಣಿತ ಸ್ಪರ್ಧೆ ಎಂದರೆ ಕಾಲಿಡಲೂ ಜಾಗವಿಲ್ಲದಷ್ಟು ಜನಜಾತ್ರೆ. ವೈವಿಧ್ಯಮಯ ಹುಲಿಗಳ ಕುಣಿತವಂತೂ ರೋಮಾಂಚಕ, ನೋಡಲೆರಡು ಕಣ್ಣು ಸಾಲದು!
ಇದೀಗ ಕುಡ್ಲದಲ್ಲಿ ಅದ್ಧೂರಿಯಾಗಿ ನಡೆಯುವ ಹುಲಿವೇಷ ಕುಣಿತವೆಂದರೆ ಯುವ ನಾಯಕ ಮಿಥುನ್ ರೈ ನೇತೃತ್ವದ ಪಿಲಿನಲಿಕೆ. ಈ ವರ್ಷ ಇದು 9ನೇ ವರ್ಷಕ್ಕೆ ಕಾಲಿಡುತ್ತಿದೆ. ಇನ್ನೊಂದು ಹುಲಿ ಕುಣಿತ ಸ್ಪರ್ಧೆಯನ್ನು ಶಾಸಕ ವೇದವ್ಯಾಸ ಕಾಮತ್ ಮೂರು ವರ್ಷ ಹಿಂದಷ್ಟೇ ಆರಂಭಿಸಿದ್ದು, ಶುಕ್ರವಾರ ಮಂಗಳೂರಿನ ನೆಹರೂ ಮೈದಾನದಲ್ಲಿ ರಾತ್ರಿವರೆಗೂ ನಡೆಯಿತು. ಪಿಲಿನಲಿಕೆಯ ಅಬ್ಬರ ಶನಿವಾರ ಅದ್ಧೂರಿಯಿಂದ ನಡೆಯಿತು.
ಶುಕ್ರವಾರ ಪಿಲಿಪರ್ಬ ನೋಡಲು ಸಾಧ್ಯವಾಗದವರು ಶನಿವಾರ ಪಿಲಿನಲಿಕೆಯ ಅದ್ಧೂರಿ ಸ್ಪರ್ಧೆಯನ್ನು ಮಂಗಳೂರಿನ ಕರಾವಳಿ ಉತ್ಸವ ಮೈದಾನದಲ್ಲಿ ವೀಕ್ಷಿಸಿ ಕಣ್ತುಂಬಿಕೊಂಡರು. 11 ತಂಡಗಳಿಂದ ಭರ್ಜರಿ ಹುಲಿವೇಷ ಕುಣಿತ. ಒಂದೊಂದರದ್ದೂ ವಿಭಿನ್ನ ಪರ್ಫಾರ್ಮೆನ್ಸ್. ಲೈವ್ ಶೋವನ್ನು ವೀಕ್ಷಿಸಲು ನೇರಪ್ರಸಾರ ವ್ಯವಸ್ಥೆಯನ್ನೂ ಮಾಡಲಾಗಿತ್ತು. ರಿಷಬ್ ಶೆಟ್ಟಿ ಸೇರಿದಂತೆ ಸ್ಯಾಂಡಲ್ ವುಡ್, ಬಾಲಿವುಡ್‌ನ ಖ್ಯಾತ ತಾರೆಯರೂ ಇಲ್ಲಿಗೆ ಆಗಮಿಸಿ ರಂಜಿಸಿದರು.